ಕೃಷಿಯಲ್ಲಿ ಮಣ್ಣು ಜೀವಂತವಾಗಿರಲು ಕೆಳಗಿನ ವಿವರಗಳನ್ನು ಅನುಸರಿಸಿ..
ಮಣ್ಣಿನ ಆರೋಗ್ಯ, ಮಣ್ಣಿನ ಜೀವಿಗಳು ಮತ್ತು ಜೀವಂತ ಮಣ್ಣಿನ ಆಹಾರ ವಿಧಾನಗಳು
ಮಣ್ಣು ಸಜೀವ ಮತ್ತು ಮಣ್ಣಿನಲ್ಲಿ ಬದುಕಿರುವ ಜೀವಿಗಳಿವೆ. ಸಜೀವ ಮಣ್ಣಿನ ವಯಸ್ಸು ಸುಮಾರು 460 ಕೋಟಿ ವರ್ಷಗಳು. ಮಣ್ಣಿನ ಮೇಲೆ ಮತ್ತು ಕೆಳಗೆ ಕೋಟ್ಯಾಂತರ ಜೀವಿಗಳು ವಾಸಿಸುತ್ತಿವೆ. ಭೂಮಿಯ ಜೀವಸಂಕುಲಗಳ ಅಳಿವು ಉಳಿವು ಮಣ್ಣಿನ ಸೂಕ್ಷ್ಮಾಣು ಜೀವಿಗಳನ್ನು ಅವಲಂಬಿಸಿದೆ. ಸಜೀವ ಮಣ್ಣಿನಲ್ಲಿ ಕೋಟಿಗಟ್ಟಲೆ ಸೂಕ್ಷ್ಮಾಣು ಜೀವಿಗಳು ಸಾವಯವ ವಸ್ತುವಿನ ಬೆಂಬಲದೊಂದಿಗೆ ಹುಟ್ಟಿ ಬೆಳೆದು ವೃದ್ಧಿಸಿ ಸಾಯುತ್ತಿರುತ್ತವೆ.
ಮಣ್ಣಿನ ಆರೋಗ್ಯ
ಜೀವಂತ ಮಣ್ಣು ಕೆಲವು ಬಾರಿ ಸಂಕಟಕ್ಕೊಳಗಾಗಬಹುದು. ಪ್ರಾಣಿ, ಪಕ್ಷಿ, ಸಸ್ಯಗಳಿಗೆ ಹೇಗೆ ಸೌಖ್ಯ ತಪ್ಪುವದೋ ಹಾಗೆ ಸಜೀವ ಮಣ್ಣಿಗೂ ಆರೋಗ್ಯ ಕೆಡುವದು, ಉಸಿರಾಟ ನಿಲ್ಲುವದು. ಆಗ ಅಂತಹ ಮಣ್ಣು ಆರೋಗ್ಯಕರ ಸಸ್ಯಗಳಿಗೆ ಆಧಾರವಾಗಲಾರದು.
ಮಣ್ಣಿನ ಮೇಲ್ಪದರದಲ್ಲಿ ಬರೀ ಕಣ್ಣಿಗೆ ಕಾಣದ, ಸೂಕ್ಷ್ಮದರ್ಶಕದಿಂದಲೇ ಕಾಣುವಂತ ಬ್ಯಾಕ್ಟಿರಿಯಾ, ಫಂಗಸ್, ಆಲ್ಗೆ, ಮೈಕೋರೆಜಾ, ಪ್ರೋಟೋಜೋವಾ ಮುಂತಾದ ಸೂಕ್ಷ್ಮಜೀವಿಗಳು ಹೆಚ್ಚಾಗಿ ಇರುತ್ತವೆ. ಆಳಕ್ಕೆ ಹೋದಂತೆ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಮಣ್ಣುಜೀವಿಗಳ ಪರಸ್ಪರ ಅವಲಂಬನೆ, ಸಹಕಾರಿ ಜೀವನ ಮತ್ತು ಸಾವಯವ ವಸ್ತುಗಳನ್ನು ಕರಗಿಸುವ ವಿಧಾನ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಬಹುಮುಖ್ಯ. ಉತ್ತಮವಾಗಿ ಕೊಳೆತ ಕಾಂಪೋಸ್ಟ್ ನ ಹ್ಯೂಮಸ್ ನಲ್ಲಿ ರೋಗ ತರುವ ಉಪದ್ರಕಾರಿ ಜೀವಿಗಳನ್ನು ಮಣ್ಣಿನಲ್ಲಿ ಶಮನ ಮಾಡುವ ಶಕ್ತಿಯಿರುತ್ತದೆ.
ಸಾವಯವ ಅಂಶವನ್ನು ನಂಬಿಬಾಳುವ ಇವೆಲ್ಲಾ ಸಸ್ಯಗಳ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಸಹಕಾರಿ. ಸಾವಯವ ಗೊಬ್ಬರ ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಅಲ್ಪ ಪ್ರಮಾಣದಲ್ಲಿ ಒದಗಿಸುವದರ ಜೊತೆಗೆ ಮಣ್ಣಿನಲ್ಲಿರುವ ಉಪಕಾರಿ ಜೀವಿಗಳನ್ನು ವೃದ್ಧಿಸಿ, ಅಪಕಾರಿ ಜೀವಿಗಳನ್ನು ದಮನ ಮಾಡುತ್ತದೆ. ಒಟ್ಟಿನಲ್ಲಿ ಮಣ್ಣಿನ ಈ ಜೀವ ಚೈತನ್ಯ, ಮಣ್ಣಿನಲ್ಲಿರುವ ಜೀವಂತ ಬೇರುಗಳು, ಸೂಕ್ಷ್ಮಾಣು ಜೀವಿಗಳು ಮತ್ತು ಕೊಳೆಯುತ್ತಿರುವ ಮತ್ತು ಸಂಪೂರ್ಣ ಕೊಳೆತ ಸಾವಯವ ಹ್ಯೂಮಸ್ ಅಂಶ ಮಣ್ಣಿನ ಆರೋಗ್ಯದ ಸಮತೋಲನವನ್ನು ಕಾಪಾಡುತ್ತವೆ. ಮಣ್ಣಿನಲ್ಲಿ ಶೇಕಡಾ 2-15ರಷ್ಟು ಸಾವಯವ ತ್ಯಾಜ್ಯಗಳನ್ನು ಸೇರಿಸುವುದರಿಂದ ಸಾವಯವ ಅಂಶವೂ ಹೆಚ್ಚಾಗಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.